ಅಂಗಾರಕ ಸಂಪ್ರದಾಯದ ಮುಂದೆ ಒಲವು ಗೆಲ್ಲುವ ಕಥನ!ವಾರ ಬಿಡುಗಡೆ
Posted date: 09 Thu, Jan 2014 – 08:56:54 AM
ಕಥೆಯ ಹೊಳಹು ಹಳತಾದರೂ ಸಹ ಪ್ರೀತಿಯೆಂಬ ಮಾಯೆ ಸದಾ ಕಾಲವೂ ಅದಕ್ಕೆ ಹೊಸತನ, ತಾಜಾತನಗಳ ಪಾಲೀಶು ಮಾಡಿ ಪೊರೆಯುತ್ತದೆ. ಬೇರೆ ಬೇರೆ ಭಾಷೆಗಳ ಚಿತ್ರಗಳನ್ನ ಒಲವೆಂಬ ಮಾಯೆ ಆ ರೀತಿಯಾಗಿ ಪೊರೆಯುತ್ತಲೇ ಬಂದಿದೆ. ಇದೀಗ ಅದೇ ರೀತಿಯದ್ದೊಂದು ಭಿನ್ನತೆಯೊಂದಿಗೆ ಅಂಗಾರಕ ಅವತರಿಸಿದ್ದಾನೆ. ಈ ಚಿತ್ರದ ಬಗ್ಗೆ ತುಂಬಾ ಭರವಸೆ ಇಟ್ಟುಕೊಂಡಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸಾ ಗೆಟಪ್‌ನೊಂದಿಗೆ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ.
 
ಒಂದು ಸಾಮಾಜಿಕ ಸ್ಥಿತ್ಯಂತರದ ಎಳೆಯಿಟ್ಟುಕೊಂಡು ‘ಅಂಗಾರಕನಿಗೆ ಕಥೆ ಹೆಣೆಯಲಾಗಿದೆ. ಇದು ಕರ್ನಾಟಕದ ಹಳ್ಳಿಯೊಂದರಲ್ಲಿ ಘಟಿಸುವ ಕಥಾನಕ. ಈವತ್ತು ದೃಷ್ಯ ಮಾಧ್ಯಮಗಳ ಭರಾಟೆ ಪ್ರತೀ ಹಳ್ಳಿಗಳಲ್ಲಿಯೂ ಇದೆ. ಆದರೆ ಅದರ ಮೂಲಕ ಮೌಢ್ಯ, ಮೂಢ ನಂಬಿಕೆಗಳು ಮತ್ತಷ್ಟು ಹೆಚ್ಚುತ್ತಿವೆ ಎಂಬ ಆರೋಪಗಳೂ ಆಗಾಗ ಕೇಳಿ ಬರುತ್ತವೆ. ಈ ಸೂಕ್ಷ್ಮದೊಂದಿಗೇ ಒಂದು ಅಪ್ಪಟ ಪ್ರೇಮ ಕಥೆ ಹೇಳಲು ಚಿತ್ರ ತಂಡ ಶ್ರಮ ವಹಿಸಿದೆ. ಸಂಪ್ರದಾಯ, ಮೂಢ ನಂಬಿಕೆಗಳು ಅದೇನೇ ಇದ್ದರೂ ಅಂತಿಮವಾಗಿ ಒಲವೇ ಗೆಲ್ಲುತ್ತದೆಂಬ ಸಂದೇಶವೂ ಇದರಲ್ಲಿದೆಯಂತೆ. ಪೇಟೆಯಿಂದ ಹಳ್ಳಿಗೆ ಬರುವ ನಾಯಕ ಪ್ರಜ್ವಲ್ ಮತ್ತು ಅದೇ ಹಳ್ಳಿ ಹುಡುಗಿಯಾಗಿ ನಟಿಸಿರುವ ನಾಯಕಿ ಪ್ರಣೀತಾಳ ನಡುವಿನ ಪ್ರೇಮ ಕಾವ್ಯವನ್ನ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆಯಂತೆ.
 ಉತ್ಸಾಹದಿಂದಲೇ ಮಾತಿಗಿಳಿದ ಪ್ರಜ್ವಲ್ ಮಾತಿನುದ್ದಕ್ಕೂ ಹೊಸಾ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವುದರ ಸಂಭ್ರಮವಿತ್ತು. ಇಲ್ಲಿ ಪ್ರಜ್ವಲ್ ಹಳ್ಳಿ ಸಿಂಬಲ್ ಆಗಿರುವ ಪಂಚೆಯುಟ್ಟು ಕಾಣಿಸಿಕೊಂಡಿದ್ದಾರಂತೆ. ‘ನನ್ನ ತಂದೆ ಸಹ ಹಲವಾರು ಚಿತ್ರಗಳಲ್ಲಿ ಈ ಗೆಟಪ್ಪಿನಲ್ಲಿ ನಟಿಸಿದ್ದರು. ಈಗ ನನಗೂ ಅಂಥಾ ಅವಕಾಶ ಸಿಕ್ಕಿರೋದು ಖುಷಿ ತಂದಿದೆ ಎಂದರು.

ನಿರ್ದೇಶಕ ಶ್ರೀನಿವಾಸ್ ಕೌಶಿಕ್ ‘ ಮನುಷ್ಯ ವರ್ಷಗಳು ಉರುಳುತ್ತಾ ಹೋದಂತೆಲ್ಲ ಮತ್ತೆ ಸಂಪ್ರದಾಯದತ್ತ, ಮೌಢ್ಯದತ್ತ ಹೋಗುತ್ತಿದ್ದಾನಾ ಅಂತನ್ನಿಸುತ್ತಿದೆ. ಅದಕ್ಕೆ ಮಾಧ್ಯಮಗಳೂ ಪ್ರೇರೇಪಿಸುತ್ತಿವೆ. ಆದರೇ ಶಂಕರಾಚಾರ್ಯರೇ ಮನುಷ್ಯ ಬದುಕುವುದು ಮುಖ್ಯ ಎಂದಿದ್ದಾರೆ. ಅದ್ವೈತ ಸಿದ್ಧಾಂತವೂ ಅದೇ ತಳಹದಿಯಲ್ಲಿ ನಿಂತಿದೆ. ಯಾವುದೇ ಸಂಪ್ರದಾಯಗಳೂ ಸಹ ಬದುಕುವುದಕ್ಕೆ ಅಡ್ಡಿಪಡಿಸುವಂತಿರಬಾರದು. ಈ ವಿಚಾರವಿಟ್ಟುಕೊಂಡೇ ಕಥೆ ಸಾಗುತ್ತದೆ ಎಂದು ಅರ್ಥಪೂರ್ಣವಾಗಿ ಮಾತಾಡಿದರು.

ಆ ಬಳಿಕ ಚಿತ್ರದ ಬಗ್ಗೆ ಮಾತು ಶುರುವಿಟ್ಟ ಖಳನಟ ಮುನಿ ತಮ್ಮ ಪಾತ್ರದ ಬಗ್ಗೆ ವಿವರಿಸಿ‘ ಈ ನಿರ್ದೇಶಕರೊಂದಿಗೆ ಎಷ್ಟು ಸಿನಿಮಾ ಬೇಕಾದರೂ ಮಾಡಬಹುದು. ಅಷ್ಟೊಂದು ಅಚ್ಚುಕಟ್ಟಿಂದ ಹೋಂ ವರ್ಕ್ ಮಾಡಿಕೊಂಡೇ ಶೂಟಿಂಗ್ ಮಾಡುತ್ತಾರೆ ಅಂತ ನಿರ್ದೇಶಕರನ್ನ ಕೊಂಡಾಡಿದರು.

ಅಂದಹಾಗೆ ಈ ಚಿತ್ರಕ್ಕೆ ಹಾರ್ಧಿಕಾ ಶೆಟ್ಟಿ ಅಲಿಯಾಸ್ ನಿಶಾ ಶೆಟ್ಟಿ ಎರಡನೇ ನಾಯಕಿ. ಇದು ತ್ರಿಕೋನ ಪ್ರೇಮದ ಪಡಿಪಾಟಲುಗಳ ಸೂಚನೆ ನೀಡುವಂತಿದೆ. ಇನ್ನುಳಿದಂತೆ ಚಿತ್ರದುದ್ದಕ್ಕೂ ಮನಸು ಮುಟ್ಟುವ ಸನ್ನಿವೇಶಗಳು, ಹಾಸ್ಯ, ಸೆಂಟಿಮೆಂಟು, ಸಾಹಸ, ಸಂಗೀತಗಳೆಲ್ಲ ಹದವಾಗಿ ಬೆರೆತಿದೆ.

ಈ ಚಿತ್ರದಲ್ಲಿ ಖ್ಯಾತ ಖಳನಟ ಮುನಿ, ಅವಿನಾಶ್ ಮುಂತಾದ ಘಟಾನುಘಟಿಗಳ ತಾರಾಬಳಗವಿದೆ. ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಂಗೀತದ ಹಾಡುಗಳು ಈ ಚಿತ್ರದ ಆಕರ್ಷಣೆಗಳಲ್ಲೊಂದು. ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಅಂಗಾರಕನಿಗೆ ಶ್ರೀಮತಿ ಜಯಸುಧಾ ರಾಘವೇಂದ್ರ ಹಣ ಹೂಡಿದ್ದಾರೆ. ಮೂಲತಃ ತಮಿಳುನಾಡಿನವರಾದ ನಿರ್ಮಾಪಕರು ಕನ್ನಡದ ಮೇಲಿನ ಅತೀವ ಪ್ರೀತಿಯಿಂದಲೇ ಚಿತ್ರ ನಿರ್ಮಿಸಿದ್ದಾರಂತೆ.
ಹೊಸಾ ಕನಸು, ಭರವಸೆಯೊಂದಿಗೆ ಈ ಚಿತ್ರ ಮಾಡಿರುವ ಚಿತ್ರ ತಂಡಕ್ಕೆ ಹೊಸಾ ವರ್ಷ ಶುಭ ತರಲೆಂಬುದು ಎಲ್ಲರ ಹಾರೈಕೆ. ಹಳೇ ‘ಗಲಾಟೆ ಗುಂಗಿಂದ ಹೊರ ಬಂದಿರುವ ಹೊಸಾ ‘ಅಂಗಾರಕನಿಗೆ ಜಯವಾಗಲಿ! 

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed